1903-72 ಬ್ರಿಟಿಷ್ ಪುರಾತತ್ತ್ವಜ್ಞ, ಮಾನವ ಶಾಸ್ತ್ರಜ್ಞ ಹಾಗೂ ನಷ್ಟವಂಶಜೀವಿಶಾಸ್ತ್ರಜ್ಞ. 1903 ಆಗಸ್ಟ್ 7ರಂದು ಕೀನ್ಯದ ನೈರೋಬಿ ಹತ್ತಿರದಲ್ಲಿರುವ ಕಬೆಟೆ ಎಂಬಲ್ಲಿ ಜನಿಸಿದ. ಇವನ ತಂದೆ ಹ್ಯಾರಿ ಮತ್ತು ತಾಯಿ ಮೇರಿ ಲೀಕಿ, ಇಬ್ಬರೂ ಬ್ರಿಟಿಷ್ ಧರ್ಮಪ್ರಚಾರಕರಾಗಿದ್ದರು. ಲೀಕಿ ಕಿಕುಯು ಆದಿವಾಸಿ ಮಕ್ಕಳೊಂದಿಗೆ ಬೆಳೆದು ದೊಡ್ಡವನಾದ ಅನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ. ಮಾನವ ಶಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಓದಿ 1926ರಲ್ಲಿ ಪದವೀಧರನಾದ. ಅನಂತರ ಮೊದಲು ಆರ್ಕಿಯಲಾಜಿಕಲ್ ಮಿಷನ್ ಟು ಟ್ಯಾನ್‍ಜನೀಯ ಸಂಸ್ಥೆಯಲ್ಲಿ ಆಫ್ರಿಕ ಅಧ್ಯಯನದ ತಜ್ಞನಾಗಿ ಕೆಲಸಕ್ಕೆ ಸೇರಿದ.

1926-37ರ ವರೆಗೆ ಈತ ಪೂರ್ವ ಆಫ್ರಿಕದಲ್ಲಿ ಅನೇಕ ಬಾರಿ ಸಂಶೋಧನ ಕಾರ್ಯವನ್ನು ಕೈಗೊಂಡ. 1945-61ರ ವರೆಗೆ ನೈರೋಬಿಯ ಕ್ರೊಯಾಂಡನ್ ಮ್ಯೂಸಿಯಮ್‍ನ ಕ್ಯುರೇಟರ್ ಆಗಿ ಕಾರ್ಯ ನಿರ್ವಹಿಸಿದ. ಕೀನ್ಯ ನ್ಯಾಶನಲ್ ಪಾರ್ಕ್ ಮತ್ತು ಅಭಯಾರಣ್ಯಗಳಿಗೆ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ.

1931ರಲ್ಲಿ ಈತ ಟ್ಯಾನ್‍ಜನೀಯದಲ್ಲಿರುವ ಓಲ್ಡುವೈ ಜಾರ್ಜ್‍ನಲ್ಲಿ ಭೂಶೋಧನೆಯನ್ನು ಪ್ರಾರಂಭಿಸಿದ. ಅನಂತರ ಈ ಸಂಶೋಧನೆ ಪ್ರಸಿದ್ಧವಾಯಿತು. 1936ರಲ್ಲಿ ಈತ ವೈಟ್ ಆಫ್ರಿಕ ಎಂಬ ಶೀರ್ಷಿಕೆಯಲ್ಲಿ ಆತ್ಮಚರಿತ್ರೆಯನ್ನೂ ಅನಂತರ ಕಿಕುಯು ಕಲ್ಚರ್ ಎಂಬ ಪುಸ್ತಕವನ್ನೂ ಬರೆದ. ಇದೇ ವೇಳೆಗೆ ಈತನಿಗೆ ಮದುವೆಯಾಯಿತು. ಅನಂತರ ಕೀನ್ಯ ಸರ್ಕಾರದ ಸಿವಿಲಿಯನ್ ಇಂಟಲಿಜನ್ಸ್ ಆಫೀಸರಾದ(1939). ಅನಂತರ ಆಫ್ರಿಕದ ಇಂಟಲಿಜನ್ಸ್ ಡಿಪಾರ್ಟ್‍ಮೆಂಟ್‍ಗೆ ವರ್ಗವಾದ. 1947ರಲ್ಲಿ ರುಸಿಂಗ್ ದ್ವೀಪದಲ್ಲಿ ಭೂಶೋಧನೆಯನ್ನು ಪ್ರಾರಂಭಿಸಿದ ಈತ 1949ರಲ್ಲಿ ಮೊದಲ ಪ್ರೊಕನ್‍ಸುಲ್‍ನ ಮುಖವನ್ನು ಹೊಂದಿದ ತಲೆಬುರುಡೆ ಅವಶೇಷವನ್ನು ಹೊರತೆಗೆದ. ಇದು ಮಂಗ ಮತ್ತು ಗೋರಿಲ್ಲ ನಡುವಿನ ತಪ್ಪಿದ ಕೊಂಡಿ ಎಂದು ಬಹಿರಂಗ ಪಡಿಸಿದ. ಲೀಕಿ ಮತ್ತು ಮೇರಿ ಕೂಡಿ ಮತ್ತೊಮ್ಮೆ ಒಲ್ಡುವೈ ನಿವೇಶನಕ್ಕೆ ಹೋಗಿ ಮತ್ತಷ್ಟು ಸಲಕರಣೆಗಳನ್ನು ಬಹಿರಂಗಪಡಿಸಿದರು. ಒಂದು ಹೊಸ ಅಸ್ಥಿಪಂಜರವನ್ನು ಭೂಶೋಧನೆಯಲ್ಲಿ ಹೊರ ತೆಗೆದು ಇದನ್ನು “ಜಿನ್ಜ್” ಎಂದು ಹೆಸರಿಸಿ ನಾಲ್ಕನೆಯ ಪಾನ್ ಆಫ್ರಿಕನ್ ಕಾಂಗ್ರೆಸ್‍ನಲ್ಲಿ ಪ್ರದರ್ಶನಕ್ಕೆ ಇಡಲಾಯಿತು (1959). ಈ ಸಂಶೋಧನೆಯಿಂದ ಬಹಳಷ್ಟು ಸಂಶೋಧಕರು ಚಕಿತರಾದರು. ಈ ಸಂಶೋಧನೆ ಲೀಕಿ ಮತ್ತು ಮೇರಿಗೆ ಪ್ರಪಂಚ ಖ್ಯಾತಿಯನ್ನು ತಂದುಕೊಟ್ಟಿತು. ಈ ಅಸ್ಥಿಪಂಜರ 1,750,000 ವರ್ಷಗಳಷ್ಟು ಹಳೆಯದೆಂಬ ಅಭಿಪ್ರಾಯವಿದೆ. ಅನಂತರ ಈತ ಜೀನ್‍ಜಾನ್‍ತ್ರೋಪಸ್‍ನ್ನು ಆಧುನಿಕ ಮಾನವನ ನೇರ ವಂಶಜನಲ್ಲವೆಂದು ಮತ್ತು ಇದನ್ನು ಪ್ರತ್ಯೇಕ ಪಳೆಯುಳಿಕೆ ಎಂದು ಬಹಿರಂಗಪಡಿಸಿ, ಇದಕ್ಕೆ ಹೋಮೋಹೆಬಿಲಿಸ್ ಎಂದು ಹೆಸರಿಸಿದ, ಹೋಮೋಹೆಬಿಲಿಸ್ ಹಾಗೂ ಜಿನ್‍ಜಾನ್‍ತ್ರೋಪಸ್ ಪೂರ್ವ ಆಫ್ರಿಕದ ಸಮಕಾಲಿಕ ಜೀವಿಗಳಾಗಿದ್ದು ಹೆಚ್ಚಿನ ಆಧುನಿಕ ಹೋಮೋನಿಡ್ ಎಂದು ತೋರ್ಪಡಿಸಿದ. ಅದರೆ ಪಳೆಯುಳಿಕೆಗಳ ಮೇಲಿನ ಈತನ ವಿಚಾರಗಳನ್ನು ಮತ್ತು ವಿಭಜನೆಗಳನ್ನು ಬಹಳಷ್ಟು ಸಂಶೋಧಕರು ಒಪ್ಪಿಕೊಂಡರಲಿಲ್ಲ; ಅನೇಕ ಭಿನ್ನಾಭಿಪ್ರಯಗಳನ್ನು ವ್ಯಕ್ತಪಡಿಸಿದ್ದರು.

ಆಡಮ್‍ಆನ್ಸೆಸ್ಟರ್ಸ್(1934), ಸ್ಟೋನ್ ಏಜ್ ಆಫ್ರಿಕ(1936), ಓಲ್ಡುವೈ ಜಾರ್ಜ್(1952), ಮವ್‍ಮವ್ ಅಂಡ್ ದಿ ಕಿಕುಯು(1952), ಅನ್‍ವೆಯ್ಲಿಂಗ್ ಮ್ಸಾನ್ಸ್ ಆರಿಜನ್(1969), ಅನಿಮಲ್ಸ್ ಆಫ್ ಈಸ್ಟ್ ಆಫ್ರಿಕ(1969)-ಇವು ಇವನ ಮುಖ್ಯ ಕೃತಿಗಳು. ಈತ 1972ರಲ್ಲಿ ನಿಧನನಾದ. 
 	
(ಬಿ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ